ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಕಲಾವಿದ
Share
ಯಕ್ಷರಂಗದ ಅಭಿಮನ್ಯು, ಅಭಿಜಾತ ಕಲಾವಿದ ತೀರ್ಥಹಳ್ಳಿ ಗೋಪಾಲ ಆಚಾರ್ಯ

ಲೇಖಕರು :
ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಜನವರಿ 3 , 2015

ಬಡಗುತಿಟ್ಟು ಯಕ್ಷಗಾನ ರಂಗದ ಅಭಿಜಾತ ಕಲಾವಿದ ಸುಮಾರು ನಾಲ್ಕು ದಶಕಗಳ ಕಾಲ ಅಭಿಮನ್ಯು, ಬಬ್ರುವಾಹನದಂತ ಪುಂಡು ವೇಷಗಳಲ್ಲಿ ಮೆರೆದು ಕ್ರಾಂತಿ ಮೂಡಿಸಿ ಯಕ್ಷರಂಗದ ಅಭಿಮನ್ಯು, ಯಕ್ಷಗಾನದ ಸಿಡಿಲಮರಿ, ಚಿರಯುವಕ ಎಂಬಿತ್ಯಾದಿ ಬಿರುದು ಪಡೆದು ಪುಂಡುವೇಷದಲ್ಲಿ ವಿಶಿಷ್ಟ ಹೆಸರು ಮಾಡಿದ ತೀರ್ಥಳ್ಳಿ ಗೋಪಾಲಾಚಾರ್ಯರಿಗೆ ಈಗ ಪ್ರಾಯ ಅರವತ್ತು ವರ್ಷಗಳ ಸಂಭ್ರಮ. ಈ ಅರವತ್ತರ ಅಭಿಮನ್ಯುವಿಗೆ ಅವರ ಅಭಿಮಾನಿ ವರ್ಗದವರು ಜನವರಿ 31ರಂದು ಕುಂದಾಪುರದಲ್ಲಿ ಅರವತ್ತರ ಅಭಿನಂದನೆ ಸಲ್ಲಿಸಲಿದ್ದಾರೆ. ಬಳಿಕ ಆಚಾರ್ಯರ ಅಭಿಮನ್ಯು ವೇಷದೊಂದಿಗೆ ಶ್ರೀ ಪೆರ್ಡೂರು ಮೇಳ ಮತ್ತು ಅತಿಥಿ ಕಲಾವಿದರಿಂದ ಬೀಷ್ಮಪರ್ವ - ದ್ರೋಣಪರ್ವ - ಕರ್ಣಪರ್ವ - ಗದಾಪರ್ವ ಎನ್ನುವ ಸಂಪೂರ್ಣ ಕುರುಕ್ಷೇತ್ರ ಪ್ರಸಂಗಗಳ ಪ್ರದರ್ಶನವಿದೆ.

ವಿಶ್ವಕರ್ಮ ಸಮಾಜದ ಕಲಾಕೂಸು

ಕೆತ್ತನೆ ಕೆಲಸ, ಶಿಲ್ಪಕಲೆ, ಕಸೂರಿ ಕಲೆ, ಸಂಗೀತ, ಬರವಣಿಗೆ, ಪತ್ರಿಕೋದ್ಯಮ ಮುಂತಾದ, ಕಲಾಪ್ರಕಾರಗಳಲ್ಲಿ ನಿಷ್ಣಾತರಾದ ವಿಶ್ವಕರ್ಮ ಸಮಾಜವು ಯಕ್ಷಗಾನ ಕ್ಷೇತ್ರಕ್ಕೆ ಕೂಡ ಮಹೋನ್ನತ ಕಲಾವಿದರನ್ನು ನೀಡಿದೆ. ರಾಜ್ಯ ಪ್ರಶಸ್ತಿ ಪುರಸ್ಕ್ರತ ಭಾಗವತ ನೆಲ್ಲೂರು ಮರಿಯಪ್ಪಾಚಾರ್, ಮದ್ದಳೆ ಮಾಂತ್ರಿಕ ಹುಂಚದಕಟ್ಟೆ ಶ್ರೀನಿವಾಸ ಆಚಾರ್, ಚೆಂಡೆವಾದಕ ತೀರ್ಥಳ್ಳಿ ಚಂದ್ರಾಚಾರ್, ಉಭಯತಿಟ್ಟುಗಳ ಸ್ತ್ರೀ ವೇಷಧಾರಿ ಎಂ. ಕೆ. ರಮೇಶಾಚಾರ್, ಬಣ್ಣದ ವೇಷಧಾರಿ ಎಳ್ಳಂಪಳ್ಳಿ ಜಗನ್ನಾಥ ಅಚಾರ್ ಹೀಗೆ ಹಿಮ್ಮೇಳ ಮುಮ್ಮೇಳವೆರಡರಲ್ಲೂ ಯಕ್ಷಲೋಕಕ್ಕೆ ಕಲಾವಿದರನ್ನು ನೀಡಿದ ಕೀರ್ತಿ ವಿಶ್ವಕರ್ಮ ಸಮಾಜಕ್ಕಿದೆ.

ವಿಶ್ವಕರ್ಮರಿಗೆ ಜನ್ಮದತ್ತವಾಗಿ ಬರುವ ಅದ್ಭುತ ಲಯ, ಅಪಾರ ಶ್ರುತಿ ಬದ್ಧತೆ, ಪಾತ್ರ ಯಾವುದೇ ಇರಲಿ ಪ್ರವೇಶದಿಂದ ನಿರ್ಗಮನದವರೆಗೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಲುವ ಚಾಕಚಕ್ಯತೆಯಿಂದ ಸ್ವಂತ ಪ್ರತಿಭೆಯಿಂದ ಮೂಡಿಬಂದ ಸಭ್ಯ ಶಿಸ್ತು ಬದ್ದ ಕಲಾವಿದ ಇದೇ ಸಮಾಜದ ಇನ್ನೊಬ್ಬ ಮೇರು ಕಲಾವಿದ ತೀರ್ಥಳ್ಳಿ ಗೋಪಾಲಾಚಾರ್ಯರು.

ಬಾಲ್ಯ, ಶಿಕ್ಷಣ ಹಾಗೂ ಯಕ್ಷಗಾನ ಪಾದಾರ್ಪಣೆ

ಯಕ್ಷಗಾನದ ಉಭಯತಿಟ್ಟುಗಳಿಗೆ ಮಹಾನ್ ಕಲಾವಿದರನ್ನು ನೀಡಿದ ಮಲೆನಾಡಿನ ತೀರ್ಥಹಳ್ಳಿ ಗೋಪಾಲಾಚಾರ್ಯರ ಹುಟ್ಟೂರಾದರೂ ಅವರ ಯಕ್ಷಗಾನ ಕಾರ್ಯಕ್ಷೇತ್ರ ಉಡುಪಿ ಜಿಲ್ಲೆ. ಬಹಳ ಹಿಂದಿನಿಂದಲೂ ಕುಂದಾಪುರ ತಾಲೂಕಿನ ನಾಯ್ಕನ ಕಟ್ಟೆಯಲ್ಲಿ ನೆಲೆನಿಂತ ಇವರು ತೀರ್ಥಹಳ್ಳಿಯಲ್ಲಿ ವಾಸುದೇವೆ ಆಚಾರ್ ಸುಲೋಚನಮ್ಮ ದಂಪತಿಗಳ ಐದು ಮಂದಿ ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದರು. ಕೇವಲ 3ನೇ ತರಗತಿ ವಿದ್ಯಾಭ್ಯಾಸ ಮಾಡಿ ತೀರ್ಥಳ್ಳಿ ಕೃಷ್ಣೋಜಿರಾಯರಲ್ಲಿ ಪ್ರಾಥಮಿಕ ಯಕ್ಷಗಾನ ಅಭ್ಯಾಸ ಮಾಡಿದರೂ ಉಳಿದದ್ದೆಲ್ಲ ಕಂಡುಕೇಳಿ ಕಲಿತದ್ದೇ ಹೆಚ್ಚು.

ಇವರ ಹೆಜ್ಜೆಗಾರಿಕೆಯಲ್ಲಿ ಮಟಪಾಡಿ ವೀರಭದ್ರ ನಾಯಕರ ಹೆಜ್ಜೆಗುರುತನ್ನು ಕಾಣಬಹುದಾಗಿದೆ. ತನ್ನ 14ನೇ ವಯಸ್ಸಿನಲ್ಲಿ ಮಲೆನಾಡಿನ ರಂಜದಕಟ್ಟೆ ಮೇಳದಲ್ಲಿ ಕೋಡಂಗಿಯಾಗಿ ಗೆಜ್ಜೆಕಟ್ಟಿದ ಇವರು ಹಿರಿಯ ಕಲಾವಿದರಂತೆ ಬಾಲಗೋಪಾಲ, ಪೀಠೀಕಾ ಸ್ತ್ರೀವೇಷ, ಒಡ್ಡೋಲಗ ಪುಂಡುವೇಷ, ಪುರುಷವೇಷ ಹೀಗೆ ಹಂತಹಂತವಾಗಿ ಮೇಲೇರಿ ಸದ್ಯ ಎರಡನೇ ವೇಷದ ಸ್ಥಾನಕ್ಕೇರಿದವರೇ ವಿನಹ ಈಗಿನಂತೆ ಧಿಡೀರ್ ಕಲಾವಿದರಾದವರಲ್ಲ.

ತೀರ್ಥಹಳ್ಳಿ ಗೋಪಾಲ ಆಚಾರ್
ಜನನ : 1955
ಜನನ ಸ್ಥಳ : ತೀರ್ಥಹಳ್ಳಿ
ಶಿವಮೊಗ್ಗ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
46 ವರ್ಷಗಳಿ೦ದ ಅದ್ವಿತೀಯ ಪು೦ಡು ವೇಷಧಾರಿಯಾಗಿ, ರಂಜದಕಟ್ಟೆ, ನಾಗರಕೊಡಗೆ, ಸಾಲಿಗ್ರಾಮ ಮೇಳಗಳಲ್ಲಿ ತಿರುಗಾಟ ನಡೆಸಿ, ಪ್ರಸ್ತುತ ಪೆರ್ಡೂರು ಮೇಳದಲ್ಲಿ ಕಳೆದ 31 ವರ್ಷಗಳಿ೦ದ ಕಲಾಸೇವೆ.

ಪ್ರಶಸ್ತಿಗಳು:
ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ

ದಿಗ್ಗಜರ ಒಡನಾಟ, ಪು೦ಡು ವೇಷಗಳಲ್ಲಿ ಮಿ೦ಚು

ಬಳಿಕ ನಾಗರಕೊಡಗೆ ಮೇಳಕ್ಕೆ ಸೇರ್ಪಡೆಗೊಂಡ ಇವರು ಅಲ್ಲಿನ 2 ವರ್ಷ ತಿರುಗಾಟದ ಬಳಿಕ ಉಡುಪಿ ಜಿಲ್ಲೆಯಲ್ಲಿ ಆ ಕಾಲದಲ್ಲಿ ಜಯಬೇರಿ ಬಾರಿಸುತಿದ್ದ ಸಾಲಿಗ್ರಾಮ ಮೇಳಕ್ಕೆ ಪೀಠೀಕಾ ಸ್ತ್ರೀ ವೇಷಧಾರಿಯಾಗಿ ಸೇರ್ಪಡೆಯು ಆಚಾರ್ರ ಯಕ್ಷಗಾನ ಬದುಕಿನ ಸುವರ್ಣ ಯುಗವೆನ್ನಬಹುದು. ನೆಲ್ಲೂರು ಮರಿಯಪ್ಪಾಚಾರ್, ಗುಂಡ್ಮಿ ಕಾಳಿಂಗನಾವಡ, ಸದಾಶಿವ ಅಮೀನ್, ಶಂಕರ ಭಾಗವತ, ಮಂದಾರ್ತಿ ರಾಮಕೃಷ್ಣರವರ ಹಿಮ್ಮೇಳದಲ್ಲಿ ಜಲವಳ್ಳಿ ವೆಂಕಟೇಶ ರಾವ್, ಶಿರಿಯಾರ ಮಂಜು ನಾಯ್ಕ್, ಅರಾಟೆ ಮಂಜುನಾಥ, ಕಿನ್ನಿಗೋಳಿ ಮುಖ್ಯಪ್ರಾಣ, ರಾಮ ನಾಯರಿ, ಬಾಸ್ಕರ ಜೋಶಿ, ಐರೋಡಿ ಗೋವಿಂದಪ್ಪನವರ ಗಜಗಟ್ಟಿ ಮುಮ್ಮೇಳದಲ್ಲಿ ಹೊಸ ಪ್ರಸಂಗಗಳಲ್ಲಿ ದಾಖಲೆಯೆಂಬಂತೆ ಈ ವರೆಗೆ ಸಹಸ್ರಾರು ಪ್ರಯೋಗಕಂಡ ನಾಗಶ್ರೀ ಪ್ರಸಂಗದ ಬೆಳಗಿನ ಜಾವದ ಶೈಥಿಲ್ಯನಾಗಿ ಮೊದಲ ವರ್ಷದಲ್ಲೇ ಅಧಿಕೃತ ಪುಂಡುವೇಷಧಾರಿಯಾಗಿ ಬಹುಬೇಗ ಗುರುತಿಸಿಕೊಂಡರು.

ಶಿರಿಯಾರ ಮಂಜುನಾಯ್ಕರನ್ನು ಅಧಿಕೃತ ಗುರುವಾಗಿರಿಸಿಕೊಂಡ ಇವರಿಗೆ ಸಾಲಿಗ್ರಾಮ ಮೇಳದ ಚೌಕಿಯೇ ಗುರುಕುಲವಾಯಿತು. ನಿರಂತರ ಹತ್ತು ವರ್ಷ ನಾಗಶ್ರೀ, ಚೆಲುವೆ ಚಿತ್ರಾವತಿ, ಶ್ರೀದೇವಿ ಬನಶಂಕರಿ, ರತಿರೇಖಾ ಮುಂತಾದ ಪ್ರಸಂಗಗಳಲ್ಲಿ ಮೂರನೇ ವೇಷಧಾರಿಯಾಗಿ ಮಿಂಚಿದ ಇವರು ಪೌರಾಣಿಕ ಪ್ರಸಂಗಗಳಲ್ಲಿ ಅಭಿಮನ್ಯು, ಬಬ್ರುವಾಹನ, ಕುಶ-ಲವ, ಧರ್ಮಾಂಗದ, ರುಕ್ಮಾಂಗ, ಶುಭಾಂಗ, ಚಿತ್ರಕೇತ ಚಿತ್ರವಾಹನ, ಮೈಂದ-ದಿವಿಜ ಮುಂತಾದ ಪುಂಡುವೇಷದಿಂದ ವೇಷದಿಂದ ಬಹುಬೇಗ ಜನಮನಗೆದ್ದರು. ಐರೋಡಿಯವರ ಸಭಾ ಅರ್ಜುನ, ಅರಾಟೆಯವರ ಚಿತ್ರಾಂಗದೆಗೆ ಆಚಾರ್ರ ಬಬ್ರುವಾಹನ ಆ ಕಾಲದ ಮಳೆಗಾಲದ ಪ್ರದರ್ಶನಗಳಲ್ಲಿ ಅಪಾರ ಯಶಸ್ಸು ಗಳಿಸಿತ್ತು. ಸಾಲಿಗ್ರಾಮ ಮೇಳದ ಹತ್ತು ವರ್ಷಗಳ ತಿರುಗಾಟದ ಬಳಿಕ ಶಿರಸಿಮೇಳಕ್ಕೆ ಸೇರಿದ ಇವರಿಗೆ ಚಿಟ್ಟಾಣಿ ಬಂದುಗಳ ಒಡನಾಟ ದೊರೆತು ಬಡಾಬಡಗಿನ ನಾಟ್ಯ ಶೈಲಿಯನ್ನೂ ಕಲಿತೂ ಎರಡೂ ಶೈಲಿಗಳ ಅಧಿಕೃತ ಪ್ರಾತಿನಿಧಿಕ ಕಲಾವಿದರಾಗಿ ಮೂಡಿಬಂದರು.

ಪೆರ್ಡೂರು ಮೇಳದಲ್ಲಿ 31 ವರ್ಷಗಳಿ೦ದ ಸುಧೀರ್ಘ ಸೇವೆ

ಇಂದಿಗೆ ಮೂವತ್ತೊಂದು ವರ್ಷದ ಹಿಂದೆ 1986ರಲ್ಲಿ ವೈ. ಕರುಣಾಕರ ಶೆಟ್ಟಿಯವರ ಯಜಮಾನಿಕೆಯಲ್ಲಿ ಡೇರೆ ಮೇಳವಾಗಿ ಪುನರಾರಂಭಗೊಂಡ ಶ್ರೀ ಪೆರ್ಡೂರು ಮೇಳಕ್ಕೆ ಪುರುಷ ವೇಷಧಾರಿಯಾಗಿ ಸೇರಿಕೊಂಡ ಇವರು ಇಂದಿನವರೆಗೂ ಅದೇ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದು ಒಂದೇ ಮೇಳದಲ್ಲಿ ಮೂವತ್ತಕ್ಕೂ ಅಧಿಕ ವರ್ಷ ತಿರುಗಾಟ ಮಾಡಿದ ಕೆಲವೇ ಕೆಲವು ಕಲಾವಿದರಲ್ಲಿ ಒಬ್ಬರಾಗಿದ್ದಾರೆ.

ಸುಬ್ರಹ್ಮಣ್ಯ ದಾರೇಶ್ವರ, ಸುರೇಶ ಶೆಟ್ಟಿ, ದುರ್ಗಪ್ಪ ಗುಡಿಗಾರ್, ಗಜಾನನ ದೇವಾಡಿಗ ಗಜಗಟ್ಟಿ ಹಿಮ್ಮೇಳದಲ್ಲಿ ನಗರ ಜಗನ್ನಾಥ ಶೆಟ್ಟಿ, ಗೋಡೆ ನಾರಾಯಣ ಹೆಗಡೆ, ಆರ್ಗೋಡು ಮೋಹನದಾಸ ಶೆಣೈ, ಉಪ್ಪುಂದ ನಾಗೇಂದ್ರ ಮುರೂರು ರಮೇಶ ಭಂಡಾರಿ, ರಾಮ ನಾಯರಿ, ಮುಂತಾದ ಕಲಾವಿದರೊಂದಿಗೆ ಪ್ರಥಮ ವರ್ಷವೇ ದಾಖಲೆ ನಿರ್ಮಿಸಿದ ಶೂದ್ರ ತಪಸ್ವಿನಿ, ಅಲ್ಲದೇ ಪೆರ್ಡೂರು ಮೇಳದ ಖ್ಯಾತಿವೆತ್ತ ಪ್ರಸಂಗಗಳಾದ ಪದ್ಮ ಪಲ್ಲವಿ, ಚಾರುಚಂದ್ರಿಕೆ, ಮಾನಸ-ಮಂದಾರ, ಪುಷ್ಪಾಂಜಲಿ ಶಿವರಂಜಿನಿ, ದಾಮಿನಿ-ಭಾಮಿನಿ, ನಾಗವಲ್ಲಿ ಪ್ರಸಂಗಗಳ ಯಶಸ್ಸಿನಲ್ಲಿ ಆಚಾರ್ರ ಕೊಡುಗೆ ಅಪಾರ.

ಅಭಿಮನ್ಯು, ಬಬ್ರುವಾಹನ, ಶ್ರೀಕೃಷ್ಣನ ಪಾತ್ರಗಳಿಗೆ ಕಣ್ಮಣಿ

ರಾಮ ನಾಯರಿ ಮತ್ತು ಗೋಪಾಲಾಚಾರ್ಯರ ಜೋಡಿವೇಷ, ಪ್ರಣಯ ಹಾಗೂ ಶೃಂಗಾರ ದ್ರಶ್ಯಗಳು, ದೀಪ ನೃತ್ಯ ಇತ್ಯಾದಿ ನವನವೀನ ಸನ್ನಿವೇಷಗಳು ಅಪಾರ ಜನಮನ್ನಣೆ ಪಡೆದವು. ಪೌರಾಣಿಕ ಪ್ರಸಂಗಗಳಲ್ಲಿ ನಾಯರಿಯವರ ಚಿತ್ರಾಂಗದೆಗೆ ಬಬ್ರುವಾಹನ, ಸುಭದ್ರೆಗೆ ಅಭಿಮನ್ಯು, ಪ್ರಭಾವತಿಗೆ ಸುಧನ್ವ ಮುಂತಾದ ವೇಷಗಳೂ ಸಹ ಅಷ್ಟೇ ಜನಮನ್ನಣೆ ಗಳಿಸಿತ್ತು. ಅಭಿಮನ್ಯು ಪಾತ್ರಕ್ಕೆ ಗೋಪಾಲಾಚಾರ್ಯರೇ ಸಾಟಿ. ಆಚಾರ್ರು ಅಂದರೆ ಅಭಿಮನ್ಯು. ಅಭಿಮನ್ಯು ಅಂದರೆ ಆಚಾರ್ರು ಅನ್ನುವಷ್ಟು ಅವರಿಗೆ ಖ್ಯಾತಿ ಬರಲು ಬಹುಕಾಲ ಬೇಕಾಗಲಿಲ್ಲ.

ಆಚಾರ್ರಿಗೆ ಕೀರ್ತಿ ತಂದುಕೊಟ್ಟ ಇನ್ನೊಂದು ಪಾತ್ರ ಶ್ರೀಕೃಷ್ಣ. ಯಾವುದೇ ಪ್ರಸಂಗದ ಕೃಷ್ಣನಿರಲಿ ಅದು ಜಾಂಬವತಿ ಕಲ್ಯಾಣವಿರಲಿ, ಕನಕಾಂಗಿ ಕಲ್ಯಾಣವಿರಲಿ ರುಕ್ಮಾವತಿ ಕಲ್ಯಾಣವಿರಲಿ, ರುಕ್ಮಿಣಿ ಕಲ್ಯಾಣವಿರಲಿ, ಸುಭದ್ರಾ ಕಲ್ಯಾಣವಿರಲಿ ಅವರ ಕೃಷ್ಣನ ಪಾತ್ರದ ನಡೆಯೇ ವಿಶಿಷ್ಟ. ತಮ್ಮ ಮಾತಿನ ಮೋಡಿಯಿಂದ ಅವರೆಂದೂ ರಂಗಸ್ಥಳದ ಆವರಣ ಭಂಗ ಮಾಡಿದವರಲ್ಲ. ಶೈಲಿಯೂ ನೂರಕ್ಕೆ ನೂರು ಯಕ್ಷಗಾನ. ಉಂಗುರ ಹಾಕಿ ಉಂಗುರ ತೆಗೆಯಬಲ್ಲುದಾದ ವೇಷಗಾರಿಕೆ. ಪ್ರಸಂಗ ಸಾಹಿತ್ಯದ ಸದಾಶಯವನ್ನು ಬಿಡದೆ ಪ್ರತಿಪಾದಿಸಿ ಕಡೆದು ನಿಲ್ಲಿಸಿದ ಬಿಂಬದ ಸ್ವರೂಪವನ್ನು ಸುಲಿಲಿತವಾಗಿ ಪ್ರೇಕ್ಷಕರಿಗೆ ದಾಟಿಸುವ ಚಾಕಚಕ್ಯತೆ, ಸುಂದರವಾದ ಕಾವ್ಯರಚನೆ, ಆಕರ್ಷಕವಾದ ನಿರೂಪಣೆ, ವಿಷಯ ಸಂಪತ್ತು ಆಚಾರ್ರ ಹೆಚ್ಚುಗಾರಿಕೆ. ಚಂದ್ರಹಾಸನಾಗಿ “ಅರರೇ ಏನ್ ಸೊಬಗು ಕಾಣುವುದಿಲ್ಲಿ. ನೇತ್ರ ಸಹ ಹರುಷವ ಕಾಂಬ ತೆರನಿಲ್ಲಿ” ಪದ್ಯದ ಅರ್ಥಗಾರಿಕೆಯೊಂದೇ ಸಾಕು ಅವರ ಮಾತುಗಾರಿಕೆಯನ್ನು ನಿರ್ಣಯಿಸಲು.

ಸೊಬಗಿನ ನೃತ್ಯಗಾರ, ಮೋಡಿಯ ಮಾತುಗಾರ

ಗೋಪಾಲಾಚಾರ್ಯರಲ್ಲಿ ವಿಶೇಷವಾಗಿ ಗುರುತಿಸಬೇಕಾಗಿದ್ದು ಬಡಗು ಮತ್ತು ಬಡಾಬಡಗಿನ ನೃತ್ಯ ಶೈಲಿಯನ್ನು ವೃತ್ತಿರಂಗದಲ್ಲಿ ಕೆರೆಮನೆ ಕಲಾವಿದರು ಮತ್ತು ಹಾರಾಡಿ ಕಲಾವಿದರನ್ನು ಬಿಟ್ಟರೆ ಉಳಿದೆಲ್ಲಾ ಕಲಾವಿದರ ಒಡನಾಡಿಯಾಗಿ ದುಡಿದ ಇವರಲ್ಲಿ ಬಡಗಿನ ಎರಡು ಪ್ರಮುಖ ನೃತ್ಯ ಶೈಲಿಯನ್ನು ಗುರುತಿಸ ಬಹುದಾಗಿದೆ. ಶ್ರುತಿ ಬದ್ಧತೆ ಮಾತುಗಾರಿಕೆಯಲ್ಲಿ ಅವರ ದೀರ್ಘಕಾಲದ ಒಡನಾಡಿಗಳಾದ ಶಿರಿಯಾರ ಮಂಜು ನಾಯ್ಕ್ ಮತ್ತು ನಗರ ಜಗನ್ನಾಥ ಶೆಟ್ಟಿಯವರ ಪ್ರಭಾವವನ್ನು ಗುರುತಿಸಬಹುದು. ನಿರಾತಂಕವಾಗಿ ನಿರರ್ಗಳವಾಗಿ ನಿರಾಯಾಸವಾಗಿ ಪುಂಖಾನುಪುಂಕವಾಗಿ ಶ್ರುತಿಬದ್ಧವಾಗಿ ಹರಿದು ಬರುವ ಆಚಾರ್ರ ಮಾತುಗಾರಿಕೆಯಲ್ಲಿ ಈ ಈರ್ವರು ಹಿರಿಯ ಕಲಾವಿದರ ಪ್ರಬಾವವನ್ನು ಗುರುತಿಸಬಹುದು.

ವೇಷಗಾರಿಕೆಯ ಸೊಬಗು ಹಾಗೂ ಮಾತುಗಾರಿಕೆಯಮೋಡಿಯೂ ಅಷ್ಟೇ ಸೊಗಸು. ರಸಬಾವಗಳ ಪರಿಪೂರ್ಣ ಪೋಷಣೆಯಲ್ಲಿ ಅವರು ತೋರಿಸುವ ಅಸಾಧಾರಣ ಪ್ರತಿಭೆ ನಿಜಕ್ಕೂ ಪ್ರಶಂಸಾರ್ಹ. ಅರ್ಜುನನು “ಆವರಾಯನಾತ್ಮಭವನೋ ವೀರನೀತ” ಎಂದು ಹಿಯಾಳಿಸುವಾಗ ನಖಶಿಖಾಂತ ಕೋಪಾವಿಷ್ಟನಾಗಿ ಮಾತನಾಡುವ ಬಬ್ರುವಾಹನನಿರಲಿ, “ತಿಳಿದೆನು ನಿನ್ನಯ ಚಿತ್ತದುಮ್ಮೊಲವ” ಎನ್ನುವಲ್ಲಿ ಮೋಕ್ಷಕ್ಕೆ ಸನ್ನಿಹಿತನಾದ ಭಕ್ತಿ ಭಾವದ ಸುಧನ್ವನಿರಲಿ, “ಸುರಿವ ಕಂಬನಿಯನ್ನು ಸೆರಗಿಂದೊರೆಸಿ ಮಾತೆಯ ಪಾದರಜವನು. ” ಎನ್ನುವಲ್ಲಿ ದ್ವಂದ್ವಕ್ಕೆ ಸಿಲುಕಿದ ಅಭಿಮನ್ಯುವಿರಲಿ, “ಮಲಗಿರುವ ಪಿತನನ್ನು ಎಬ್ಬಿಸುತ ಗಾಂಗೇಯ” ಎನ್ನುವಲ್ಲಿ ತಂದೆಗೆ ಮದುವೆ ಮಾಡಿಸುವ ದೇವವ್ರತನಿರಲಿ. “ಬಂದೆಯ ಇನವಂಶವಾರಿದಿ ಚಂದಿರನೆ” ಎನ್ನುವಲ್ಲಿ ಭರತನಲ್ಲಿ ರಾಮನ ಭಾತೃ ವಾತ್ಸಲ್ಯವಿರರಲಿ, “ಪುರಜನರನುಡಿಕೇಳಿ ಹರಿಯು ತನ್ನಯ ಮನದಿ” ಎನ್ನುವಲ್ಲಿ ಮೈಂದ ದಿವಿಜರನ್ನು ನೆನೆಸಿಕೊಳ್ಳುವ ಕೃಷ್ಣನಿರಲಿ, ಇಲ್ಲೆಲ್ಲಾ ಆಚಾರ್ರ ಮಾತುಗಾರಿಕೆಯ ಮೋಡಿ ವರ್ಣಿಸಲಸದಳ. ಹೊಸ ಸಾಮಾಜಿಕ ಪ್ರಸಂಗಗಳಲ್ಲೂ ಭಾವಪೂರ್ಣವಾಗಿ ಅಭಿನಯಿಸುವ ಇವರ ಶೂದ್ರ ತಪಸ್ವಿನಿ, ಪದ್ಮಪಲ್ಲವಿ, ನಾಗವಲ್ಲಿ ಪ್ರಸಂಗಗಳ ಪಾತ್ರಗಳೇ ಸಾಕು ಇವರ ಅಭಿನಯ ಸಾಮರ್ಥ್ಯ ಮತ್ತು ಮಾತುಗಾರಿಕೆಯನ್ನು ಅಳೆಯಲು.

ಮೂರು ತಲೆಮಾರಿನ ಭಾಗವತರ ಪದ್ಯಕ್ಕೆ ಹೆಜ್ಜೆ

ಸುಮಾರು 46 ವರ್ಷ ಬಡಗುತಿಟ್ಟು ರಂಗಸ್ಥಳವನ್ನು ಶ್ರೀಮಂತಗೊಳಿಸಿದ ಆಚಾರ್ರು ಕೋಡಂಗಿಯಿಂದ ಸದ್ಯ ಪೆರ್ಡೂರು ಮೇಳದ ಎರಡನೇ ವೇಷದವರೆಗೆ ನಡೆದುಬಂದ ಯಶೋಗಾಥೆ ಇನ್ನೊಬ್ಬರಿಗೆ ಆದರ್ಶವಾದದ್ದು. ನೆಲ್ಲೂರು ಮರಿಯಪ್ಪಾಚಾರ್, ಮರವಂತೆ ನರಸಿಂಹ ದಾಸ್, ಕಾಳಿಂಗ ನಾವಡ, ಸುಬ್ರಹ್ಮಣ್ಯ ದಾರೇಶ್ವರರಿಂದ ಇಂದಿನ ಭಾಗವತ ರಾಘವೇಂದ್ರ ಆಚಾರ್ಯರವರೆಗೆ ಸುಮಾರು ಮೂರು ತಲೆಮಾರಿನ ಭಾಗವತರ ಪದ್ಯಕ್ಕೆ ಹೆಜ್ಜೆ ಹಾಕಿದ್ದೂ ಅಲ್ಲದೇ ಮೂರು ತಲೆಮಾರಿನ ಹಿರಿಯ ಕಿರಿಯ ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಕೀರ್ತಿ ಸಹ ಇವರಿಗಿದೆ.

ಎರಡನೇ ವೇಷದ ಸ್ಥಾನದಲ್ಲಿದ್ದರೂ ಸೌಮ್ಯ ಸ್ವಭಾವದ ಮಿತಭಾಷಿಯಾದ ಇವರು ಎಂದಿಗೂ ಸ್ವಾಭಿಮಾನ ಬಿಡದೆ ಇನ್ನೊಬ್ಬರಲ್ಲಿ ಸಹಾಯಹಸ್ತ ಯಾಚಿಸಿದವರಲ್ಲ. ರಂಗದ ಚಲನೆ ನಿಲುವಿನಲ್ಲಿ ಸ್ವಂತಿಕೆಯ ಛಾಪು, ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ ಸಮತೂಕದ ಮಾತು. ಔಚಿತ್ಯಕ್ಕೆ ತಕ್ಕ ಅಭಿನಯ, ಅಧಿಕವಲ್ಲದ ಕುಣಿತ, ರಂಗದ ಅಚ್ಚುಕಟ್ಟು ಸುಸ್ಪಷ್ಟ ಮಾತು, ಅಪಾರ ಪ್ರತ್ಯುತ್ಪನ್ನತಾ ಮತಿತ್ವ, ಶ್ರುತಿಬದ್ದತೆ, ಶಿಸ್ತುಬದ್ದತೆಯಿಂದ ಅಭಿವ್ಯಕ್ತಿ ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳುವ ಜಾಗರೂಕತೆಯನ್ನು ಇವರ ವೇಷಗಾರಿಕೆಯಲ್ಲಿ ಖಚಿತವಾಗಿ ಗಮನಿಸಬಹುದು. ದೇವರೂ ಎಲ್ಲವನ್ನೂ ಒಬ್ಬ ವ್ಯಕ್ತಿಗೆ ನೀಡುವುದಿಲ್ಲ ಎಂಬ ಲೋಕರೂಢಿಯಂತೆ ಆಳ್ತನದಲ್ಲಿ ಸ್ವಲ್ಪ ಇನ್ನೂ ಎತ್ತರವಾಗಿದ್ದರೆ ಯಕ್ಷಲೋಕದ ಯಾವುದೇ ಒಬ್ಬ ಅಗ್ರಶ್ರೇಣಿಯ ಕಲಾವಿದರ ಸಾಲಿಗೆ ಇವರನ್ನು ಸೇರಿಸಬಹುದು. ಬಡಗುತಿಟ್ಟಿನ ಮುಂಡಾಸು ವೇಷಕ್ಕೆ ಬೇಕಾದ ಎತ್ತರದ ಆಳ್ತನ ಇವರಲ್ಲಿ ಇಲ್ಲದಿರುದೊಂದೆ ಅವರ ಕೊರತೆ. ಇದು ಅವರ ದೋಷ ಅಲ್ಲ ಎಂದು ಪರಿಗಣಿಸಬೇಕಾಗುತ್ತದೆ.

ಮಿತಬಾಷಿ, ಮಿತ ಸಂಸಾರಿ

ಹಗಲು ವ್ಯವಹಾರದಲ್ಲಿ ಮಿತಬಾಷಿ, ದಾಕ್ಷಿಣ್ಯ ಸ್ವಭಾವದವರಾದ ಇವರು ಮಿತ ಸಂಸಾರಿ. ಪತ್ನಿ ಮಂಜುಳಾ ಮತ್ತು ಏಕಮಾತ್ರ ಪುತ್ರ ನಿಧೀಶ್ ದಾವಣಗೆರೆ ಸರ್ಕಾರಿ ಕಾಲೇಜಿನಲ್ಲಿ ಇಂಜಿನೀಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಅರವತ್ತನೇ ಸಂವಸ್ಸರಕ್ಕೆ ಕಾಲಿಡುತ್ತಿರುವ ಆಚಾರ್ರ ಬಾಳು ಹಸನಾಗಲಿ. ಅರವತ್ತರ ಅಭಿನಂದನೆ ಒಂದು ಸಾರ್ಥಕ ಕಾರ್ಯಕ್ರಮ. ಅಭಿನಂದನೆಗೆ ಮುಂದಾಗಿರುವ ಅವರ ಅಭಿಮಾನಿಗಳು ಅಬಿನಂದನಾರ್ಹರು.



****************

ತೀರ್ಥಹಳ್ಳಿ ಗೋಪಾಲ ಆಚಾರ್ಯರವರ ಕೆಲವು ಛಾಯಾ ಚಿತ್ರಗಳು



( ಕೃಪೆ : ಪ್ರಕಾಶ್ ಹೆಗ್ಡೆ, ಅಶೋಕ್ ಮೆನನ್, ಸ೦ತೋಷ್ ವೈದ್ಯ ಹಾಗೂ ಅ೦ತರ್ಜಾಲದ ಅನಾಮಿಕ ಯಕ್ಷಗಾನಾಭಿಮಾನಿಗಳು )













ಹಲವು ವೇದಿಕೆಗಳಲ್ಲಿ ಸನ್ಮಾನ










****************

ತೀರ್ಥಹಳ್ಳಿ ಗೋಪಾಲ ಆಚಾರ್ಯರವರ ಕೆಲವು ದೃಶ್ಯಾವಳಿಗಳು

ದಾರೇಶ್ವರರವರ ಪದ್ಯಕ್ಕೆ ಆಚಾರಿಯವರ ನಾಟ್ಯ




ರಾಘವೇ೦ದ್ರ ಆಚಾರಿಯವರ ಪದ್ಯಕ್ಕೆ ಆಚಾರಿಯವರ ನಾಟ್ಯ




ಕಿಗ್ಗ ಹಿರಿಯಣ್ಣಾಚಾರ್ ರವರ ಪದ್ಯಕ್ಕೆ ಆಚಾರಿಯವರ ನಾಟ್ಯ




ಪ್ರವೇಶದ ದೃಶ್ಯಾವಳಿ






Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
kavitha yadav(1/16/2015)
gopal achar avara nagavalli mathu shankarabharanada yakshagana live matthu ulida thumba yakshagana video nodiddeve. avara pathragalellavu adbhutha
Mohith perdoor(1/9/2015)
Yaksharangada CHIRA YUVAKA GOPALANNA avarige hardhika abhinandanegalu....
Rajeev Shetty(1/9/2015)
GOPAL AACHARIYAVARU OBBA ASADARANA, SARALA , SAJJANA KALAVIDA YENNUWOODAKKE 2 MAATE ILLA ... DANYOSMI ...
Prakash K H(1/8/2015)
Sadakaala Yaksharangadalli nimmannu heegeye nodalu apekshisutheve
Radhakrishna Rao Mundkur(1/5/2015)
ತುಂಬ ಸೌಜನ್ಯಯುತ ಕಲಾವಿದರು.....
Umesh Hegde(1/5/2015)
ಪಾತ್ರವನ್ನು ವಂಚಿಸದ, ರಂಗದ ಚೌಕಟ್ಟಿಗೆ ಅನ್ವರ್ಥನಾಮ.
Umesh Naik(1/5/2015)
Super. Nanna nechhina kalavidha. Love you gopalanna.
Nagaraja Acharya Idoor(1/5/2015)
ನನ್ನ ಪ್ರೀತಿಯ ಕಲಾವಿದ .......ಆಚಾರ್ಯರ ಗತ್ತು ಘಾಂಬಿರ್ಯ ಇವತ್ತು ಹಾಗೆ ಇದೆ.....
Mahesh Sriyan(1/5/2015)
Gopal acharyru. Yaksha rangakondu (GOD GIFT)
Prashanth Bhatta Nagara(1/5/2015)
60 ರ,ಅಭಿಮನ್ಯುವನ್ನ...ಮತ್ತೆ ಶತಾಯಸ್ಸಿನ..ಅಭಿಮನ್ಯುವಿನ ಪಾತ್ರವ ನಾವು ನೋಡುವ ಭಾಗ್ಯವ,ಅವರಿಗೆ ಭಗವಂತ ಆಯಸ್ಸು-ಆರೋಗ್ಯ ಕರುಣಿಸಲಿ...ಆಚಾರ್ಯಂ ಗೆಲ್ಗೆ..
Shri Nidhi(1/5/2015)
Badagu yaksharangadha sidilamari prachanda prathibhe
chandra Achar(1/4/2015)
ಸಮಯೋಚಿತ ಲೇಖನ.ಅರವತ್ತರ ಸಂಭ್ರಮಕ್ಕೆ ಶುಭ ಹಾರೈಕೆಗಳು.
Ganesha hegde(1/4/2015)
ಇವರು ನಮ್ಮ ಯಕ್ಶ್ಯಗಾನ ರ೦ಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ . ಇವರು ಅಪ್ರತಿಮ ಕಲಾವಿದರು ಕೂಡ . .. ದೇವರು ಇವರಿಗೆ ಹಚ್ಚಿನ ಆರೋಗ್ಯ ಮತ್ತು ಆಯಸ್ಸು ನೀಡಲಿ ..




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ